ಕೃತಕ ಉಸಿರಾಟ
 
ಆಕಸ್ಮಿಕದ ಪರಿಣಾಮವಾಗಿ ಸ್ವಾಭಾವಿಕ ಉಸಿರಾಟಕ್ಕೆ ತೊಂದರೆ ಆದಾಗ ಅಥವಾ ಅದು ನಿಂತುಹೋದಾಗ ಸ್ವಾಭಾವಿಕ ಉಸಿರಾಟವನ್ನು ಮತ್ತೆ ತೊಡಗಿಸಲು ಅನುಸರಿಸುವ ವಿಧಾನ. ಅಕಸ್ಮಾತ್ತಾಗಿ ನೀರಿನಲ್ಲಿ ಮುಳುಗಿ ಹೋದಾಗ ವಿದ್ಯುದಾಘಾತವಾದಾಗ, ಕುತ್ತಿಗೆಯನ್ನು ಇತರರು ಹಿಸುಕಿದಾಗ, ಬಾಹ್ಯ ಪದಾರ್ಥ ಉಸಿರ್ನಾಳದಲ್ಲಿ ಸಿಕ್ಕಿ ಹಾಕಿಕೊಂಡಾಗ, ಕ್ಲೋರೋಫಾರಂ ಮುಂತಾದ ಜ್ಞಾನಹಾರಿಗಳ ಅತಿಪ್ರಯೋಗವಾದಾಗ, ಹೊಗೆ ಇಂಗಾಲದ ಮಾನಾಕ್ಸೈಡ್ ತುಂಬಿದ ವಾತಾವರಣದಲ್ಲಿ ಸಾಕಷ್ಟು ಕಾಲ ಇದ್ದಾಗ-ಇದೇ ಮುಂತಾದ ಸಂದರ್ಭಗಳಲ್ಲಿ ಫÀುಪ್ಪುಸಗಳ ಕ್ರಿಯಾವಿನ್ಯಾಸಕ್ಕೆ ಬೇಕಾಗುವ ಆಕ್ಸಿಜನ್ ಪೂರೈಕೆ ನಿಂತುಹೋಗಿ ಅಥವಾ ಅದರಲ್ಲಿ ಕೊರೆ ಉಂಟಾಗಿ ಸ್ವಾಭಾವಿಕ ಉಸಿರಾಟದಲ್ಲಿ ನ್ಯೂನತೆ ತಲೆದೋರುತ್ತದೆ. ಇದರಿಂದ ಒದಗುವ ಪ್ರಾಣಾಪಾಯದಿಂದ ವ್ಯಕ್ತಿಯನ್ನು ರಕ್ಷಿಸಲು ಇತರ ಯುಕ್ತ ಪ್ರಥಮ ಚಿಕಿತ್ಸೆಗಳ ಜೊತೆಗೆ ಕೃತಕ ಉಸಿರಾಟದಲ್ಲಿ ಸಹ ತೊಡಗಬೇಕು. ಇದರ ಮುಖ್ಯ ಗುರಿ ಗಾಳಿಗೂಡಿನಲ್ಲಿ ಅನಿಲದ ಬದಲಾವಣೆಮಾಡಿ ಹೃದಯ ಮತ್ತು ನರಮಂಡಲವನ್ನು ಸುಸ್ಥಿತಿಯಲ್ಲಿಡುವುದು. (ವೈ.ವಿ.ಎ)

ಕೃತಕ ಉಸಿರಾಟವನ್ನು ದೈಹಿಕವಾಗಿ ಇಲ್ಲವೆ ಯಾಂತ್ರಿಕವಾಗಿ ಕೈಗೊಳ್ಳಬಹುದು. ಏಕಾಏಕಿ ಉಸಿರಾಟದ ನಿಲುಗಡೆಯುಂಟಾದಾಗ ದೈಹಿಕ ಕ್ರಮಗಳಿಂದ ಉಸಿರಾಟದ ಗತಿಯನ್ನು ಹಿಂತಿರುಗಿಸಿ ಪುನಶ್ಚೇತನಗೊಳಿಸಬಹುದು. ಉಸಿರಾಟ ಕ್ರಮದಲ್ಲಿ ದೀರ್ಘಕಾಲ ಅಸಮರ್ಪಕತೆಯುಂಟಾದಾಗ ಯಾಂತ್ರಿಕ ವಿಧಾನಗಳು ಪರಿಣಾಮಕಾರಿಯಾಗಿ ಕೆಲಸಮಾಡಬಲ್ಲವು. ದೈಹಿಕ ವಿಧಾನಗಳಲ್ಲಿ ಶೇಫರ್, ಸಿಲ್ವೆಸ್ಟರ್, ಈವ್ ಹೋಲ್ಗರ್-ನೀಲ್ಸೆನ್‍ರ ಮತ್ತು ಬಾಯಿಯಿಂದ ಬಾಯಿ ಉಸಿರಾಟಕ್ರಮಗಳು ಬಳಕೆಯಲ್ಲಿವೆ. ಈ ವಿಧಾನಗಳನ್ನು ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬಹುದು. 

ಶೇಫರ್ ವಿಧಾನ : ವ್ಯಕ್ತಿಯ ಉಸಿರಾಟದ ಪುನಶ್ಚೇತನ ಕಾರ್ಯದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಬಹುಮುಖ್ಯ ವಿಧಾನ. ನೀರಿನಲ್ಲಿ ಮುಳುಗಿ ಉಸಿರಾಟದ ತೊಂದರೆಯಿಂದ ಬಳಲುವ ವ್ಯಕ್ತಿಯಲ್ಲಿ ಈ ವಿಧಾನ ಪರಿಣಾಮಕಾರಿಯಾಗಿ ಬಳಕೆಯಾಗಿದೆ. ವ್ಯಕ್ತಿಯ ಬಾಯಿಯನ್ನು ಶುದ್ಧಗೊಳಿಸಿ ನಾಲಗೆಯನ್ನು ಮುಂದಕ್ಕೆಳೆದು ಕವಿಚಿ ಮಲಗಿಸಬೇಕು. ತಲೆಯನ್ನು ಒಂದು ಪಕ್ಕಕ್ಕೆ ತಿರುಗಿಸಬೇಕು. ಎದೆಯ ಕೆಳಗೆ ದಿಂಬನ್ನೋ ಇಲ್ಲವೇ ಬಟ್ಟೆಯನ್ನೋ ಮಡಿಸಿ ಇಡಬೇಕು. ಈ ರೀತಿ ಮಲಗಿಸುವುದರಿಂದ ಜೊಲ್ಲು, ಲೋಳೆ ಪದಾರ್ಥಗಳು ಬಾಯಿಯಿಂದ ಹೊರಕ್ಕೆ ಬರುತ್ತವೆ. ಇದರಿಂದಾಗಿ ಉಚ್ಛಾಸ ನಿಶ್ವಾಸ ಯಾವ ತಡೆಯೂ ಇಲ್ಲದೆ ನಡೆಯಲು ಅನುಕೂಲವಾಗುತ್ತದೆ. ಪುನಶ್ಚೇತಕ ತನ್ನ ಮಂಡಿಯನ್ನೂರಿ ವ್ಯಕ್ತಿಯ ತಲೆಯತ್ತ ಮುಖಮಾಡಿ ಒಂದು ಪಕ್ಕದಲ್ಲಿ ಕುಳಿತುಕೊಳ್ಳಬೇಕು. ತನ್ನ ಎರಡೂ ಹಸ್ತಗಳನ್ನು ವ್ಯಕ್ತಿಯ ಎದೆಗೂಡಿನ ಕೆಳ ಪಕ್ಕೆಲುಬುಗಳ ಮೇಲಿಟ್ಟು ಮುಂದೆ ಬಾಗಿ, ಎರಡು ಕ್ಷಣ ಇಡೀ ದೇಹದ ಭಾರವನ್ನು ಹಸ್ತದ ಮೇಲೆ ಹಾಕಿ ಶಕ್ತಿಯಿಂದ ಸೊಂಟದತ್ತ ಒತ್ತಬೇಕು. ಇದರ ಫಲವಾಗಿ ಹೊಟ್ಟೆಯೊಳಗಿನ ಒತ್ತಡ ಹೆಚ್ಚಿ ವಪೆ ಮೇಲಕ್ಕೆ ತಳ್ಳಲ್ಪಡುತ್ತದೆ. ಆಗ ಗಾಳಿ ಎದೆಗೂಡಿನಿಂದ ಹೊರಕ್ಕೆ ದಬ್ಬಲ್ಪಡುತ್ತದೆ. ಅನಂತರ ಒತ್ತುವಿಕೆಯನ್ನು ಸಡಿಲಗೊಳಿಸಿ ಎರಡು ಕ್ಷಣ ಹಿಂದಕ್ಕೆ ಬಾಗಬೇಕು. ಆಗ ಹೊಟ್ಟೆಯಲ್ಲಿನ ಒತ್ತಡ ಕಡಿಮೆಯಾಗಿ ವಪೆ ಕೆಳಕ್ಕಿಳಿಯುತ್ತದೆ. ಫÀುಪ್ಪುಸ ತನ್ನ ಸ್ಥಿತಿಸ್ಥಾಪಕಶಕ್ತಿಯಿಂದ ಹಿಗ್ಗಿ ಗಾಳಿಯನ್ನು ಒಳಕ್ಕೆಳೆದುಕೊಳ್ಳುತ್ತದೆ. ಇದರ ಫಲವಾಗಿ ಒಟ್ಟು ಫÀುಪ್ಪುಸದ ಉಸಿರಾಟದ ಆಳವು ದೊರೆಯುತ್ತದೆ. ಅಷ್ಟು ಆಕ್ಸಿಜನ್À ರಕ್ತಶುದ್ಧೀಕರಣಕ್ಕೆ ಸಾಕು. 

ಸಿಲ್ವೆಸ್ಟರ್ ವಿಧಾನ :  ಈ ವಿಧಾನದಲ್ಲಿ ವ್ಯಕ್ತಿಯನ್ನು ಅಂಗಾತ ಮಲಗಿಸಬೇಕು. ನಾಲಗೆಯನ್ನು ಹೊರಕ್ಕೆ ಎಳೆದಿಟ್ಟು ಮುಖವನ್ನು ಒಂದು ಪಕ್ಕಕ್ಕೆ ತಿರುಗಿಸಿ, ಬಾಯಿಯಿಂದ ಒಸರುವ ಲೋಳೆ ಪದಾರ್ಥವನ್ನು ಒರಸುತ್ತಿರಬೇಕು. ಅಲ್ಲಿ ಇರಬಹುದಾದ ಕೃತಕ ಹಲ್ಲುಗಳು, ಸಸ್ಯಭಾಗಗಳನ್ನು ತೆಗೆಯಬೇಕು. ಪುನಶ್ಚೇತಕ ವ್ಯಕ್ತಿಯ ತಲೆಯ ಬಳಿ ಬಗ್ಗಿ ಕುಳಿತುಕೊಳ್ಳಬೇಕು. ಆತನ ಎರಡೂ ತೋಳುಗಳನ್ನು ಹಿಡಿದು ಮೇಲೆತ್ತಿ ಅನಂತರ ಕೈಗಳನ್ನೂ ಹಿಂದಕ್ಕೆ ಎಳೆದು ಎದೆಯ ಮೇಲಿರಿಸಿ ಒತ್ತಬೇಕು. ಈ ತೆರನಾದ ಚಲನೆಯಿಂದ ಎದೆಗೂಡು ಹಿಗ್ಗಿ ಕುಗ್ಗಿ ಕ್ರಮವಾಗಿ ಗಾಳಿ ಒಳಕ್ಕೂ ಹೊರಕ್ಕೂ ಹೋಗುವಂತೆ ಮಾಡಲು ಸಹಾಯಕವಾಗುವುದು. ಗಾಳಿಯ ಚಲನೆಗೆ ಯಾವ ತಡೆಯೂ ಉಸಿರುನಾಳದಲ್ಲಿ ಇರಬಾರದು. ಹಾಗಲ್ಲದಿದ್ದರೆ ಗಾಳಿಗೂಡಿನಲ್ಲಿ ಒತ್ತಡ ಹೆಚ್ಚಿ ಅದು ಒಡೆದು ಹೋಗುವ ಸಾಧ್ಯತೆಯಿದೆ.

	ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ಹೊರಕ್ಕೆ ಎಳೆದ ಮೇಲೆ ಅವನ ಎರಡು ಕಾಲುಗಳನ್ನು ಹಿಡಿದೆತ್ತಿ ತಲೆ ಕೆಳಕ್ಕೆ ಮಾಡಿಯೋ(ಬ್ಯಾಂಟಿಂಗ್‍ನ ವಿಧಾನ) ಇಲ್ಲವೆ ಕಾಲುಗಳೆರಡನ್ನೂ ಹಿಡಿದು ಸುತ್ತ ತಿರುಗಿಸಿಯೋ ಒಳಕ್ಕೆ ಸೇರಿದ ನೀರು ಹೊರ ಹೋಗುವಂತೆ ಮಾಡಬೇಕು. ಇದರಿಂದ ಜಠರ ಮತ್ತು ಶ್ವಾಸಕೋಶಗಳಲ್ಲಿ ಸೇರಿದ ನೀರು ಹೊರಕ್ಕೆ ಬರುತ್ತದೆ. ಅನಂತರ ಕೃತಕ ಉಸಿರಾಟ ಕ್ರಮವನ್ನು ಕೈಗೊಳ್ಳಬೇಕು.

	ಈವ್‍ನ ತೂಗು ವಿಧಾನ : ಚೇತನಗೊಳಿಸಬೇಕಾದ ವ್ಯಕ್ತಿಯನ್ನು ಅಸ್ವಸ್ಥರನ್ನು  ಹೊರುವ ಮಂಚಕ್ಕೆ ಕಟ್ಟಿ ಮಲಗಿಸಬೇಕು. ಬಳಿಕ ಅನುಕ್ರಮವಾಗಿ ತಲೆ ಮತ್ತು ಪಾದಗಳನ್ನು 45 ಡಿಗ್ರಿ ಕೋನದಷ್ಟು ಮೇಲಕ್ಕೂ ಕೆಳಕ್ಕೂ ಮಾಡಬೇಕು. ಮಿನಿಟಿಗೆ 8-10 ಬಾರಿ ಈ ತೆರನಾದ ಚಲನೆಯನ್ನು ಮಾಡಿಸಬೇಕು. ನಾಲ್ಕು ಸೆಕೆಂಡು ಕಾಲ ತಲೆಯನ್ನು ಕೆಳಕ್ಕೆ ಮಾಡಬೇಕು. ಆಗ ಹೊಟ್ಟೆಯೊಳಗಿನ ಅವಯವಗಳ ಭಾರ ವಪೆಯ ಮೇಲೆ ಬಿದ್ದು ಗಾಳಿ ಒತ್ತಡದಿಂದ ಹೊರದೂಡಲ್ಪಡುತ್ತದೆ. ತರುವಾಯ ಮೂರು ಸೆಕೆಂಡು ಕಾಲ ಪಾದವನ್ನು ಕೆಳಕ್ಕೆ ಮಾಡಬೇಕು. ಆಗ ವಪೆ ಕೆಳಕ್ಕೆ ಇಳಿದು ಗಾಳಿ ಒಳಕ್ಕೆ ಎಳೆಯಲ್ಪಡುತ್ತದೆ. 

	ಹೋಲ್ಗರ್-ನೀಲ್ಸೆನ್‍ರ ವಿಧಾನ : ಚೇತನಗೊಳಿಸಬೇಕಾದ ವ್ಯಕ್ತಿಯನ್ನು ಕವಿಚಿ ಮಲಗಿಸಿ ಮುಖವನ್ನು ಒಂದು ಪಕ್ಕಕ್ಕೆ ತಿರುಗಿಸಬೇಕು. ಮೊಳಕೈಯನ್ನು ಮಡಿಸಿ ತೋಳನ್ನು ದೇಹದಿಂದ ಹೊರಕ್ಕೆಳೆದು ಇರಿಸಬೇಕು. ಪ್ರಾರಂಭದಲ್ಲಿ ಬಾಯಿಯನ್ನು ಚೊಕ್ಕಟಗೊಳಿಸಿ ಅಲ್ಲಿರುವ ನೀರು, ಲೋಳೆ ಪದಾರ್ಥಗಳನ್ನು ಹೊರಕ್ಕೆ ತೆಗೆದುಹಾಕಬೇಕು. ಪುನಶ್ಚೇತಕ ವ್ಯಕ್ತಿಯ ಮುಂದೆ ಬಗ್ಗಿ, ಅವನ ತಲೆಯತ್ತ ಮುಖಮಾಡಿ ಕುಳಿತುಕೊಳ್ಳಬೇಕು. ತನ್ನ ಎರಡು ಹಸ್ತಗಳನ್ನೂ ವ್ಯಕ್ತಿಯ ಬೆನ್ನಮೇಲೆ ಇಟ್ಟು ಮುಂದಕ್ಕೆ ಬಗ್ಗಿ ತನ್ನ ದೇಹಭಾರವನ್ನು ವ್ಯಕ್ತಿಯ ಬೆನ್ನ ಮೇಲೆ ಹೇರಬೇಕು. ಇದರ ಫಲವಾಗಿ ಎದೆ ಬಗ್ಗಿ ಉಸಿರು ಹೊರಕ್ಕೆ ಬರುವುದು. ಅನಂತರ ಪುನಶ್ಚೇತಕ ಈ ಸ್ಥಾನದಿಂದ ಹಿಂದೆ ಸರಿದು ಮೊದಲಿನ ಸ್ಥಿತಿಗೆ ಬರಬೇಕು: ಮತ್ತು ವ್ಯಕ್ತಿಯ ಮೊಳಕೈ ಹಿಡಿದು ತೋಳನ್ನು ಅಗಲಗೊಳಿಸಬೇಕು. ಇದರಿಂದ ಗಾಳಿ ಒಳಹೋಗಲು ಸಹಾಯಕವಾಗುವುದು. ಈ ಕ್ರಮವನ್ನು ಮಿನಿಟಿಗೆ 10-12 ಬಾರಿ ಮಾಡಬೇಕು.

ಬಾಯಿಯಿಂದ ಬಾಯಿ ಉಸಿರಾಟ:  ಶ್ವಾಸಕೋಶದ ಸೋಲುವಿಕೆ ಏಕಾಏಕಿ ಉಂಟಾದಾಗ, ಹೃದಯಸ್ತಂಭನವಾದಾಗ ಹೃದಯದ ಒತ್ತುವಿಕೆಗೆ ಪೂರಕವಾಗಿ ಬಾಯಿಯಿಂದ ಬಾಯಿ ಉಸಿರಾಟ ನೀಡಿ ರಕ್ತ ಆಕ್ಸಿಜನ್ನಿನಿಂದ ಕೂಡಿರುವಂತೆ ಮಾಡಬೇಕು. ವ್ಯಕ್ತಿಯನ್ನು ಮುಖ ಮೇಲೆ ಮಾಡಿ ಮಲಗಿಸಬೇಕು. ಪುನಶ್ಚೇತಕ ವ್ಯಕ್ತಿಯ ತಲೆಯ ಬಳಿ ಕುಳಿತುಕೊಂಡು ಆತನ ಕತ್ತನ್ನು ಮೇಲ್ಮುಖವಾಗಿ ಹಿಡಿದಿಡಬೇಕು. ಒಂದು ಕೈಯ ಹೆಬ್ಬೆರಳು ಮತ್ತು ತೋರುಬೆರಳಿನ ಸಹಾಯದಿಂದ ಮೂಗಿನ ಹೊಳ್ಳೆಯನ್ನು ಮುಚ್ಚಬೇಕು. ಇದು ಶ್ವಾಸಕೋಶದೊಳಕ್ಕೆ ಯೋಗ್ಯ ಪ್ರಮಾಣದಲ್ಲಿ ಗಾಳಿಸೇರಲು ಸಹಾಯಕವಾಗುವುದು. ಪುನಶ್ಚೇತಕ ತನ್ನ ಬಾಯಿಯನ್ನು ವ್ಯಕ್ತಿಯ ಬಾಯಿಯ ಮೇಲಿಟ್ಟು ತನ್ನೆಲ್ಲ ಶಕ್ತಿಯನ್ನೂ ಉಪಯೋಗಿಸಿ ಜೋರಾಗಿ ಗಾಳಿಯನ್ನು ಊದಬೇಕು. ಇದರಿಂದ ಎದೆಗೂಡು ಮತ್ತು ಫುಪ್ಪುಸ ಹಿಗ್ಗುತ್ತದೆ. ಅನಂತರ ಪುನಶ್ಚೇತಕ ತನ್ನ ಬಾಯಿಯನ್ನು ಹೊರಕ್ಕೆ ತೆಗೆಯಬೇಕು. ಈ ಕ್ರಮವನ್ನು ಮಿನಿಟಿಗೆ 10-12 ಬಾರಿ ಮಾಡಬೇಕು. ಈ ವಿಧಾನವನ್ನು ಎಲ್ಲ ವಯಸ್ಸಿನವರಲ್ಲಿಯೂ ಪರಿಣಾಮಕಾರಿಯಾಗಿ ಮಾಡಬಹುದು.

ಹೊಸದಾಗಿ ಹುಟ್ಟಿದ ಕೂಸಿನಲ್ಲಿ ಉಸಿರಾಟ ನಿಧಾನವಾದರೆ ಕೂಸನ್ನು ತಲೆಕೆಳಗೆ ಮಾಡಿ ಹಿಡಿದು ಬೆನ್ನ ಮೇಲೆ ತಟ್ಟಬೇಕು. ಇದರಿಂದ ಉಸಿರಾಟ ಪ್ರಾರಂಭಗೊಂಡು ಮಿದುಳಿಗೆ ರಕ್ತಪ್ರಸರಣ ನಿರಾತಂಕವಾಗಿ ಜರಗುವುದು. ಇಲ್ಲವೆ ಕ್ರಮವಾಗಿ ಕೂಸನ್ನು ಬಿಸಿ ಮತ್ತು ತಣ್ಣೀರಿನಲ್ಲಿಡಬೇಕು ಅಥವಾ ಮಗುವಿನ ಬಾಯಿ ತೆರೆದು ಮೂಗು ಮುಚ್ಚಿ  ಜೋರಾಗಿ ಉಸಿರನ್ನು ಬಿಡಬೇಕು. ಇದರಿಂದ ರಕ್ತದಲ್ಲಿ ಇಂಗಾಲದ ಡೈಆಕ್ಸೈಡ್ ಮೊತ್ತ ಹೆಚ್ಚಿ ಉಸಿರಾಟಕೇಂದ್ರ ಚೇತನಗೊಳ್ಳುವುದು.

ಯಾಂತ್ರಿಕ ವಿಧಾನಗಳು : ದೈಹಿಕಕ್ರಮಗಳಿಂದ ದೀರ್ಘಾವಧಿ ಕಾಲ ಕೃತಕ ಉಸಿರಾಟ ಮಾಡುವುದು ಕಷ್ಟಸಾಧ್ಯವಾಗುವುದು. ಯೋಗ್ಯರೀತಿಯಲ್ಲಿ ಶ್ವಾಸಕ್ರಿಯೆಯನ್ನು ನಡೆಸಲು ಚೈತನ್ಯವಿಲ್ಲದ ವ್ಯಕ್ತಿಯಲ್ಲಿ ನಳಿಗೆ ಅಥವಾ ಮುಖವಾಡದ ಮೂಲಕ ಆಕ್ಸಿಜನ್ನನ್ನು ಫುಪ್ಪುಸದೊಳಗೆ ಸೇರಿಸಬೇಕು. ರಸಾಯನ ವಸ್ತುಗಳಿಂದ ಉಸಿರಾಟಕೇಂದ್ರವನ್ನು ಚೇತನಗೊಳಿಸಿ ಉಸಿರಾಟವನ್ನು ಕ್ರಮಗೊಳಿಸಬಹುದು. ಇದು ಅಸಾಧ್ಯವಾದಾಗ ಯಾಂತ್ರಿಕ ಉಸಿರಾಟಕ್ರಮಕ್ಕೆ ಶರಣು ಹೋಗಬೇಕಾಗುವುದು. ಪೋಲಿಯೋ, ಧನುರ್ವಾಯುವಿನಂಥ ನರಕ್ಕೆ ಸಂಬಂಧಿಸಿದ ರೋಗಗಳು, ಸ್ನಾಯು ಶಕ್ತಿಹೀನತೆಯ ಕುತ್ತಿನ  ಸಮಯದಲ್ಲಿ, ಬಾರ್ಬಿಟುರೇಟ್, ಮಾರ್ಫಿಯದಂಥ ಔಷಧಗಳ ವಿಪರೀತ ಸೇವನೆ, ಇಂಗಾಲದ ಮಾನಾಕ್ಸೈಡಿನ ಸೇವನೆ,  ಜಜ್ಜಲ್ಪಟ್ಟ ಎದೆ. ತೆರೆದ ಹೃದಯ ಚಿಕಿತ್ಸೆ ಮತ್ತು ಜನ್ಮ ತಳೆದ ಕೂಸಿನಲ್ಲಿ ತಲೆದೋರುವ ಮೃದು ಪೊರೆಯ ರೋಗ- ಇಲ್ಲೆಲ್ಲ ಯಾಂತ್ರಿಕ ಉಸಿರಾಟ ಕ್ರಮವನ್ನು ಕೈಗೊಂಡು ಉಸಿರಾಟದ ದೈಹಿಕಶ್ರಮವನ್ನು ಕಡಿಮೆ ಮಾಡಬೇಕಾಗುವುದು. ಈ ವಿಧಾನಗಳಿಂದ ಗಾಳಿಗೂಡಿನಲ್ಲಿ ಗಾಳಿಯ ಆಳವು ಹೆಚ್ಚುತ್ತದೆ. ದೀರ್ಘಕಾಲೀನ ಕೆಮ್ಮು ರೋಗ, ಬಿಡದ ಗೂರಲುಬ್ಬಸ ರೋಗಗಳಲ್ಲಿ ಉಂಟಾಗುವ ಉಸಿರಾಟದ ಸೋಲುವಿಕೆಯಲ್ಲಿಯೂ ಈ ತೆರನಾದ ಚಿಕಿತ್ಸೆ ಬೇಕಾಗಬಹುದು. ಯಾಂತ್ರಿಕ ವಿಧಾನಗಳು ಎರಡು ಮೂಲಭೂತ ತತ್ತ್ವಗಳ ಮೇಲೆ ಕೆಲಸಮಾಡುತ್ತವೆ; ಕ್ರಮವಾಗಿ ಎದೆಗೂಡನ್ನು ಹಿಗ್ಗಿಸುವುದು ಮತ್ತು ಕುಗ್ಗಿಸುವುದು; ಗಾಳಿ ಅಥವಾ ಆಕ್ಸಿಜನ್ನನ್ನು ನೇರವಾಗಿ ಫುಪ್ಪುಸದೊಳಗೆ ಬಿಟ್ಟು ಬಿಟ್ಟು ಇಲ್ಲವೆ ಬಿಡದೆ ಸೇರಿಸುವುದು. 

	ಕಬ್ಬಿಣ ಶ್ವಾಸಕೋಶ : ಯಾಂತ್ರಿಕ ವಿಧಾನಗಳ ಶೋಧದ ಪ್ರಾರಂಭಿಕ ದಿಶೆಗಳಲ್ಲಿ ಡ್ರಿಂಕರ್‍ನ ಗಾಳಿಯಿಲ್ಲದ ಕೋಶಾಗಾರವನ್ನು ಉಸಿರಾಟದ ಪುನಶ್ಚೇತನಕ್ಕೆ ಉಪಯೋಗಿಸಲಾಗುತ್ತಿದ್ದಿತು. ಈ ಕ್ರಮದಲ್ಲಿ ರೋಗಿಯ ತಲೆ ಮಾತ್ರ ಹೊರಗಿರುತ್ತದೆ. ಯಂತ್ರದ ಸಹಾಯದಿಂದ ಕೋಶಾಗಾರದ ಒತ್ತಡವನ್ನು ಹೆಚ್ಚು ಕಡಿಮೆ ಮಾಡಬಹುದು. ಕೋಶಾಗಾರದ ಒತ್ತಡ ಕಡಿಮೆಯಾದಾಗ ಎದೆಗೂಡು ಹಿಗ್ಗಿ ಗಾಳಿಯನ್ನೊಳಕ್ಕೆ ಎಳೆದುಕೊಳ್ಳುತ್ತದೆ. ಕೋಶಾಗಾರದ ಒತ್ತಡ ಹೆಚ್ಚಾದಾಗ ಎದೆಗೂಡು ಸಂಕುಚನಗೊಂಡು ಗಾಳಿ ಹೊರಹೋಗುತ್ತದೆ.

	ಒತ್ತಡ ಉಸಿರಾಟ ವಿಧಾನಗಳು : ಒತ್ತಡ ಮತ್ತು ವಿಸ್ತಾರದ ಘನ ಸಾಮಥ್ರ್ಯದ ಸಾಧನಗಳು ಕೃತಕ ಉಸಿರಾಟಕ್ರಮದಲ್ಲಿ ಪರಿಣಾಮಕಾರಿ ಬದಲಾವಣೆಗಳನ್ನು ತಂದಿವೆ. ನಿರ್ದಿಷ್ಟ ಪಡಿಸಿದ ಒತ್ತಡದಲ್ಲಿ ಗಾಳಿ ಫುಪ್ಪುಸವನ್ನು ಸೇರುವುದು.

	ಒತ್ತಡಕ್ರಮ : ಒತ್ತಡಕ್ರಮದಲ್ಲಿ ಕೆಲಸಮಾಡುವ ಬರ್ಕ್, ಬೆನೆಟ್ ಎಂಬ ಸಣ್ಣ ಯಂತ್ರಗಳು ಮೊದಲೇ ನಿರ್ಧರಿಸಲ್ಪಟ್ಟ ಒತ್ತಡ ಗಾಳಿಯನ್ನು ರೋಗಿಯ ಶ್ವಾಸಕೋಶಗಳ ಒಳಕ್ಕೆ ತಳ್ಳಿ ಅವನ್ನು ಹಿಗ್ಗಿಸುತ್ತವೆ. ಆ ಕಾಲದಲ್ಲಿ ಶ್ವಾಸಕೋಶಗಳಲ್ಲಿ ಇರಬಹುದಾದ ಜಲಸಂಚಯ, ಉಸಿರುನಾಳದಲ್ಲಿ ಲೋಳೆ ಸೇರಿಕೆ, ಮುರುಚಿಕೊಂಡ ರಬ್ಬರ್ ನಳಿಗೆ ಮತ್ತು ಪಂಗುಸಿರ್ನಾಳದ ಸ್ನಾಯುಸೆಳಕು-ಸಮರ್ಪಕ ಉಸಿರಾಟಕ್ಕೆ ಯೋಗ್ಯ ಸನ್ನಿವೇಶವನ್ನು ಒದಗಿಸುವುದಿಲ್ಲ.

ಘನವಿಸ್ತಾರಕ್ರಮ : ಕೇಪ್, ರ್ಯಾಡ್‍ಕ್ಲಿಪ್ ಮತ್ತು ಸ್ಮಿತ್ ಕ್ಲಾರ್ಕರ ವಿಸ್ತಾರ ಸಾಮಥ್ರ್ಯದ ಯಂತ್ರಗಳು ದೊಡ್ಡವು ಮತ್ತು ತೊಡಕಿನವು ಆಗಿದ್ದರೂ ಅವು ರೋಗಿಗೆ ಹೆಚ್ಚು ಉಪಯುಕ್ತವಾಗಿದೆ, ಅವುಗಳ ಉಪಯೋಗದಿಂದಾಗಿ ರೋಗಿಯ ಶ್ವಾಸಕೋಶದ ಉಸಿರಾಟಕ್ರಮದಲ್ಲಿ ಏನೇ ವ್ಯತ್ಯಯವಿದ್ದರೂ ಆತನ ಫುಪ್ಪುಸದೊಳಗೆ ನಿರ್ದಿಷ್ಟಪಡಿಸಿದ ಪರಿಮಾಣದಲ್ಲಿ ಗಾಳಿ ಒಳಸೇರುವುದು. ಹೆಚ್ಚು ಒತ್ತಡದಿಂದ ಸಂಕುಚನಗೊಳಿಸಿದ ಗಾಳಿಯನ್ನು ಬಿಸಿನೀರಿನ ಮೂಲಕ ಹಾಯಿಸಿ ಅದನ್ನು ಉಸಿರುನಾಳದೊಳಕ್ಕೆ ಸೇರಿಸಬೇಕು.

ನಳಿಗೆಯೊಂದನ್ನು ಉಸಿರುನಾಳದ ಮೂಲಕವಾಗಲೀ ಅಥವಾ ಕತ್ತರಿಸಿದ ಉಸಿರುನಾಳದ ತೂತಿನ ಮೂಲಕವಾಗಲೀ ಸೇರಿಸಿ ಗಾಳಿ ಅಥವಾ ಆಕ್ಸಿಜನ್‍ನÀ ಪ್ರವಾಹವನ್ನು ಅದರ ಮೂಲಕ ಹರಿಯಬಿಟ್ಟು ಫುಪ್ಪುಸದೊಳಕ್ಕೆ ಸೇರುವಂತೆ ಮಾಡಬೇಕು. ದೀರ್ಘಕಾಲ ಕೃತಕ ಉಸಿರಾಟ ಕ್ರಮ ಬೇಕಾದರೆ ಉಸಿರುನಾಳದಲ್ಲಿ ತೂತುಮಾಡಿ ನಳಿಗೆ ಸೇರಿಸಬೇಕು. ಅದರಿಂದಾಗಿ ಶ್ವಾಸಮಾರ್ಗವನ್ನು ಶುದ್ಧವಾಗಿರಿಸಬಹುದು. ರೋಗಿಯ ಉಸಿರಾಟದ ಸಾಮಥ್ರ್ಯವನ್ನು ಯಂತ್ರದೊಡನೆ ಹೊಂದಾಣಿಕೆಗೊಳಿಸಬಹುದು. ಅದು ಸಾಧ್ಯವಾಗದಿದ್ದರೆ ಮಾರ್ಫಿಯ ಅಥವಾ ಕ್ಯುರಾರೆಯಂಥ ಔಷಧಗಳನ್ನು ಕೊಟ್ಟು ವ್ಯಕ್ತಿಗತ ಶ್ರಮವನ್ನು ನಷ್ಟಗೊಳಿಸಿ ಯಂತ್ರದ ಮೂಲಕ ಆಕ್ಸಿಜನ್ ಪೂರಿತ ಗಾಳಿಯನ್ನು ಫುಪ್ಪುಸದೊಳಸೇರಿಸಬೇಕು. ಇದರ ಫಲವಾಗಿ ರೋಗಿಯ ಅರಿವು ತಿಳಿಗೊಳ್ಳುವುದು ರಕ್ತದಲ್ಲಿನ ಇಂಗಾಲದ ಡೈಆಕ್ಸೈಡ್ ಪ್ರಮಾಣ ಕಡಿಮೆಯಾಗುವುದು. ಉಸಿರಾಟದ ಗತಿ ಸಮರ್ಪಕವಾದ ಮೇಲೆ ಯಾಂತ್ರಿಕ ಸಾಧನದ ಉಪಯೋಗವನ್ನು ನಿಲ್ಲಿಸಬೇಕು.   
(ಪಿ.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ